ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗಳ ನೇಮಕಾತಿ-2015 ಗೆ ಸಂಬಂಧಿಸಿದಂತೆ 22-08-2022 ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಅದನ್ನು 22-08-2022 ರಂದು ಹಿಂಪಡೆಯಲಾಗಿದೆ ಎಂದು ಪಿಯು ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
“22-08-2022 ರಂದು ಪ್ರಕಟಿಸಲಾದ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ನ್ಯೂನ್ಯತೆಗಳಿವೆ ಎಂದು ಕೆಲವು ಅಭ್ಯರ್ಥಿಗಳು ದಿನಾಂಕ 25-08-2022 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಿಗೆ ಮನವಿಗಳನ್ನು ಸಲ್ಲಿಸಿದ್ದು, ಇಂತಹ ಮನವಿಗಳನ್ನು ಪರಿಗಣಿಸಿ ಸಚಿವರು ಇಲಾಖೆಯಿಂದ ಪ್ರಕಟಿಸಿರುವ ಪಟ್ಟಿಯನ್ನು ಮರುಪರಿಶೀಲಿಸಲು ದಿನಾಂಕ 26-08-2022 ರಂದು ನಿರ್ದೇಶಿಸಿದ್ದಾರೆ.” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅದರಂತೆ ಪರಿಶೀಲಿಸಲಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಲ್ಲಿಸಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾದ ಮೀಸಲಾತಿ ಗುಂಪನ್ನು ಯಥಾವತ್ತಾಗಿ ಪರಿಗಣಿಸಲಾಗಿದ್ದು, ನ್ಯೂನ್ಯತೆಯನ್ನು ಸರಿಪಡಿಸಲು ದಿನಾಂಕ 22-08-2022 ರಂದು ಪ್ರಕಟಿಸಲಾಗಿರುವ ಪಟ್ಟಿಯನ್ನು ಹಿಂಪಡೆಯಲಾಗಿದೆ. ಮತ್ತು ಕರಡು ಪರಿಷ್ಕೃತ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ, ನಂತರ ಅಂತಿಮಗೊಳಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಶುಕ್ರವಾರ ಹೊರಡಿಸಿರುವ ಪ್ರಕಟಣೆ ತಿಳಿಸಿದ್ದಾರೆ.

